ನಿಮ್ಮಂತೆ ನೀವಿರಿ | Nimmante Neeviri
₹150.00 Original price was: ₹150.00.₹135.00Current price is: ₹135.00.
ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare?
₹250.00 Original price was: ₹250.00.₹225.00Current price is: ₹225.00.
ಜೈಲು ಕತೆಗಳು | Jilu Kategalu
Publisher :
Amulya Pustaka
ISBN :
978-81-964691-6-0
Publication Date :
2023
Edition :
1st
No of Pages :
136
ಜೈಲು, ಖೈದಿ, ಅಪರಾಧ, ಶಿಕ್ಷೆ, ಸಂದರ್ಭ, ಸೇಡು, ಸಂಚಿತ ಕರ್ಮ, ಪ್ರಾರಬ್ಧ ಕರ್ಮ, ಕಾನೂನು, ನಾಗರಿಕತೆ, ನ್ಯಾಯಾಲಯ, ಪ್ರೀತಿ, ಪಾಪ-ಪುಣ್ಯ
₹170.00
100 in stock
100 in stock
Description
ಇಪ್ಪತ್ಮೂರು ಕತೆಗಳ ಕೆ. ಸತ್ಯನಾರಾಯಣ ಅವರ “ಜೈಲು ಕತೆಗಳು” ಸಂಕಲನ ಒಂದು ವಿಶಿಷ್ಟ ಪ್ರಯೋಗ. ಎಲವೂ ಜೈಲಿಗೆ ಸಂಬಂಧಿಸಿದ ಕತೆಗಳು. ಕೆಲವು ಘಟನೆಗಳ ಸುತ್ತ ಹೆಣೆದಿರುವ ಕಥಾನಕಗಳಾದರೆ ಇನ್ನು ಕೆಲವು ವ್ಯಕ್ತಿಚಿತ್ರಗಳು. ಇವುಗಳಲ್ಲಿ ಕೆಲವು ಸಾರ್ವಜನಿಕ ವ್ಯಕ್ತಿಗಳಿಗೆ, ಘಟನೆಗಳಿಗೆ ಸಂಬಂಧಿಸಿದ ಕಥನಗಳಂತೆ ಅನಿಸಿದರೆ ಇನ್ನು ಕೆಲವು ನಮ್ಮ ಅನುಭವದಾಚೆಯ ಕಥನಗಳು. ಲಘುಹಾಸ್ಯಭರಿತ ‘ನಿಜಘಟನೆಗಳಿವು’ ಎನ್ನುವ ನಿರೂಪಣೆಯಿಂದ ಕತೆಗಳಂತೆ ಓದಿಸಿಕೊಂಡರೂ, ವರ್ತಮಾನದಲ್ಲಿ ನಡೆಯುತ್ತಿರುವ ಕತೆಗಳಿವು ಎನ್ನುವ ಎಚ್ಚರ ಜೈಲು ವ್ಯವಸ್ಥೆಯ ಬಗ್ಗೆ ಆಶ್ಚರ್ಯಭರಿತ ಕುತೂಹಲ ಕತೆಗಳಿಗಿಂತ ತೀವ್ರವಾಗಿ ಕಾಡುವಂತೆ ಮಾಡುತ್ತದೆ. ಕಾಲ್ಪನಿಕ ಕತೆಗಳಿಗಿರುವ ಸಾಧ್ಯಾಸಾಧ್ಯತೆಗಳನ್ನು ಅನುಸರಿಸಬೇಕಾದ ಅಗತ್ಯ ದೈನಂದಿನಲ್ಲಿ ನಡೆಯುವ ಘಟನೆಗಳಿಗೆ ಇಲ್ಲದಿರುವುದು ಒಂದು ವ್ಯವಸ್ಥೆಯ ಸುತ್ತ ಇಷ್ಟೊಂದು ವೈವಿಧ್ಯಮಯ ಕತೆಗಳನ್ನು ಹುಟ್ಟುಹಾಕಲು ಸಾಧ್ಯವಾಗಿಸಿರಬಹುದು.
ಇಡೀ ಸಂಕಲನ ಓದಿದ ನಂತರ ಸಿನೆಮಾಗಳಲ್ಲಿ ನೋಡಿದ ಜೈಲುಗಳ ಕುರಿತು ಹೆದರಿಕೆ ಹುಟ್ಟಿಸುವಚಿತ್ರಗಳ ಬದಲಿಗೆ ಒಂದು ತರಹದ, ಇದೂ ಇನ್ನೊಂದು ಕೇರಿಯೋ, ಅಪಾರ್ಟಮೆಂಟ್ ಕಾಂಪ್ಲೆಕ್ಸೋ ಎನ್ನುವ ಸಲುಗೆ ಬೆಳೆದರೆ ಆಶ್ಚರ್ಯವಿಲ್ಲ. ಜೈಲಿಗೆ ಹೆದರಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಗಾಂಧೀಜಿ ಜೈಲಿಗೆ ಹತ್ತಿರದಲ್ಲಿಯೇ ಸತ್ಯಾಗ್ರಹಿಗಳ ಶಿಬಿರ ಮಾಡಿ ಆ ಕುರಿತ ಭಯವನ್ನು ಕಡಿಮೆ ಮಾಡಿದ್ದರಂತೆ. ಹಾಗೆ ನೋಡಿದರೆ, ಈಗಲೂ ಜೈಲು ಜೀವನದ ಕುರಿತು ಭಯಬೀಳುತ್ತಿರುವವರಲ್ಲಿ ಸಭ್ಯರೇ ಹೆಚ್ಚಿರಬಹುದು. ಈ ಸಂಕಲನದಲ್ಲಿ ಜೈಲಿನ ಕಾಠಿಣ್ಯತೆಯ ಕುರಿತು ಹೆಚ್ಚು ವಿವರಗಳು ಬರುವುದಿಲ್ಲ. ಇದನ್ನು ಓದುತ್ತ ಹೋದಂತೆ ಜೈಲುಜೀವನ ಸದರವಾಗಬಹುದು. ಈ ದೃಷ್ಟಿಯಿಂದ ಪುಸ್ತಕದಲ್ಲಿ ‘ಓದುಗರು ಅರಿತಿದ್ದಾರೆ ಎನ್ನುವ ಕಾರಣದಿಂದ ಜೈಲಿನೊಳಗಿನ ಕ್ರೌರ್ಯಕ್ಕೆ ಒತ್ತುಕೊಟ್ಟಿಲ್ಲ.”’ ಎಂಬ ಹೇಳಿಕೆ ಇರಬೇಕಿತ್ತೇನೋ!
ಜೈಲು ಅಂದರೆ ದೂರದ ಸಂಗತಿಯಲ್ಲ, ನಮ್ಮದೇ – “ಖೈದಿಗಳೆಲ್ಲ ನೆಂಟರಿಷ್ಟರು ಮತ್ತು ನೆರೆಹೊರೆಯವರೇ” ಎಂದು ನಿರೂಪಕನ ಆತ್ಮೀಯತೆಯ, ಭರವಸೆ ಹುಟ್ಟಿಸುವ ಮಾತುಗಳಿಂದ ಶುರುವಾಗುವ ಕತೆಗಳ ಸಾಲು, ಜೈಲಿಗೆ ಹೋಗಲು ತಯಾರಿ ನಡೆಸುವ ಲಂಚದಲ್ಲಿ ಚೌಕಾಸಿ ನಡೆಸುವ ಮೇಡಂ, ಇಲಿಯೊಂದಿಗೆ ಜೈಲಿನಿಂದ ಹೊರಬರುವ ಜನನಾಯಕಿ ಜಯಮ್ಮ, ಜೈಲಿನಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಲ್ಲಿದ್ದೂ ರಂಗದಲ್ಲಿ ಮಿಂಚುವ ಕಲಾವಿದರು.. ಜೈಲಿನ ವೈವಿಧ್ಯಮಯ ಸಜೀವ ಚಿತ್ರಗಳ ಟ್ಯಾಬ್ಲೋಗಳು ಒಂದಾದ ನಂತರ ಇನ್ನೊಂದರಂತೆ ಸಾಗುತ್ತಲೇ ಇರುತ್ತವೆ. ಇಲ್ಲಿನ ಕಥನಗಳಲ್ಲಿ ಬರುವ ಮಂತ್ರಿಮಾಗದರ ಜೈಲು ಜೀವನ, ಸರ್ಕಾರ ಪೂರೈಸುವ ಬಾಡೂಟ ಉಂಡು ‘ತುರ್ತುಪರಿಸ್ಥಿತಿ”ಯನ್ನು ‘ವಿರೋಧಿ’ ನಾಯಕರ ಚಿತ್ರಗಳು.. ಓದುತ್ತ ಹೋದಂತೆ, ಬಯಲಾಟ ನೋಡಿದವರಿಗೆ ಭೀಮ-ದುರ್ಯೋಧನ ವೇಷಧಾರಿಗಳು ಚೌಕಿ ಮನೆಯೊಳಗೆ ಬಿಡುವಿನ ಸಂದರ್ಭದಲ್ಲಿ ಬೀಡಿಸೇದುತ್ತ ಕುಳಿತಿರುವುದನ್ನು ಮೊದಲಬಾರಿಗೆ ನೋಡಿದ ಬಾಲ್ಯದ ನೆನಪು ಬರಲೂಬಹುದು! ಕೆಲವು ಪಾತ್ರಗಳಂತೂ ದೊಡ್ಡ ಭಾರವನ್ನು ಕಳೆದುಕೊಂಡು ಸ್ವತಂತ್ರ(!)ವಾಗಲು ಅಪರಾಧ ಮಾಡಿ ಜೈಲು ಸೇರಿ ಬಿಡುಗಡೆ ಪಡೆದಂತೆ ಕಾಣಿಸುತ್ತವೆ.
ನೂರು (Benjamin Franklin ಪ್ರಕಾರ ನೂರು, William Blackstone ಪ್ರಕಾರ ಹತ್ತು!) ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದನ್ನು ನಾವು ಒಪ್ಪಿಕೊಂಡಿರುವಾಗ, ಅಪರಾಧಿಗಳಲ್ಲಿ ಜೈಲಿನ ಒಳಗಿರುವುದಕ್ಕಿಂತ ಹೊರಗೇ ಹೆಚ್ಚು (೯೦% ಅಥವಾ ೯೯%) ಇದ್ದಾರೆ ಎನ್ನುವುದನ್ನೂ ಒಪ್ಪಿಕೊಂಡಂತೆಯೇ. ಹಾಗಿದ್ದರೆ ಒಳಗಿರುವವರ ಮೇಲೆ ಕಳಂಕ ಯಾಕೆ? ಸಿಕ್ಕಿಬಿದ್ದರು ಅಂತಲೇ? ಇಲ್ಲಿ ಕಥನಗಳು ಈ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡುತ್ತವೆ.
ನಿರಪರಾಧಿಗೆ ಶಿಕ್ಷೆಯಾಗುವ ಮತ್ತು ಅಪರಾಧಿ ತಪ್ಪಿಸಿಕೊಳ್ಳುವ ಅನುಪಾತದ ಮಿತಿಯನ್ನು (೧:೧೦ ಅಥವಾ ೧:೧೦೦) ಒಪ್ಪಿಕೊಳ್ಳುವುದೆಂದರೆ ಅಪರೂಪಕ್ಕೆ ನಿರಪರಾಧಿಗೂ ಶಿಕ್ಷೆಯಾಗಬಹುದು ಎನ್ನುವುದನ್ನೂ ಒಪ್ಪಿಕೊಂಡಂತೆಯೇ. ಈ ಅನುಪಾತ ಕೆಲವು ಕಾನೂನುಗಳಿಗೆ (ದೇಶದ್ರೋಹ, ಭಯೋತ್ಪಾದನೆ, …ಪಟ್ಟಿ ಈಗ ಬೆಳೆಯುತ್ತಲೇ ಇದೆ.) ತುಂಬ ಸಣ್ಣದಾಗಿ, ನೂರುಜನ ನಿರಪರಾಧಿಗಳಿಗೆ ಶಿಕ್ಷೆಯಾದರೂ ತೊಂದರೆಯಿಲ್ಲ, ಒಬ್ಬ ಅಪರಾಧಿ ತಪ್ಪಿಸಿಕೊಳ್ಳಬಾರದು ಎಂದಾಗಿರುವುದರಿಂದ ಜೈಲು ಶಿಕ್ಷೆ ನೈತಿಕ ಮಟ್ಟದಲ್ಲಿ ಇನ್ನೂ ಅರ್ಥಹೀನವಾಗುತ್ತದೆ. ನ್ಯಾಯ ಪಡೆಯಲು ಮಾಡಬೇಕಾದ ಖರ್ಚು, ವಶೀಲಿಬಾಜಿಗಳು ಜೈಲಿನ ಹೊರಗಿರುವ ‘ಅಪರಾಧಿ’ಗಳ ನೈತಿಕ ಮೌಲ್ಯವನ್ನು ಇನ್ನಷ್ಟು ಅಪಹಾಸ್ಯ ಮಾಡುತ್ತವೆ. (ಉದಾಹರಣೆಗೆ ಲಕ್ಷ ರೂಪಾಯಿ ಚೆಕ್ ಬೌನ್ಸ ಆಗಿ ಜೈಲು ಸೇರಿದವರ ಎದುರು ಸಾವಿರ ಕೋಟಿ ಪಂಗನಾಮ ಹಾಕಿಯೂ ಹೊರಗಿದ್ದವರ ನೈತಿಕತೆ, ಅಥವಾ ಬಿಲಿಯನ್ ಡಾಲರು ಆದಾಯವಿದ್ದರೂ ‘ವ್ಯವಹಾರಿಕ ಜ್ಞಾನ’ದಿಂದ ಚಿಕ್ಕಾಸು ತೆರಿಗೆ ಕೊಡದವರ ನೈತಿಕತೆ!) ಈ ಹಿನ್ನೆಲೆಯಲ್ಲಿ ಈ ಕಥನಗಳಲ್ಲಿ ಬರುವ ಜೈಲಿನಲ್ಲಿದ್ದೂ ಸೌಕರ್ಯ ಪಡೆಯುವ ಜನರ ಬಗ್ಗೆ ಜನರ ಬಗ್ಗೆ ಏನನ್ನಿಸಬೇಕು? ‘ತಪ್ಪಿತಸ್ಥರು ಜೈಲಿನ ಒಳಗೂ, ಹೊರಗೂ ಇದ್ದಾರೆ. ತೊಂದರೆ-ತಾಪತ್ರಯಗಳು (ಹಾಗೆಯೇ ಕೆಲವರಿಗೆ ಸೌಲಭ್ಯಗಳು!) ಎರಡೂ ಕಡೆ ಇವೆ. ಸ್ವಾತಂತ್ರ್ಯದಲ್ಲಿನ ಮಿತಿ ಅಥವಾ ಆಯಾಮಮಾತ್ರ ಬೇರೆಬೇರೆ.’ ಎನ್ನುವ ಎಚ್ಚರದ ಕಡೆ ಈ ಕಥಾನಕಗಳು ಕೊಂಡೊಯ್ಯುತ್ತವೆ.
ಖೈದಿಗಳ ಬದುಕು, ಮನಸ್ಥಿತಿಯನ್ನು ಚಿತ್ರಿಸುವ ಹಲವು ಕಥೆಕಾದಂಬರಿಗಳು ಬಂದಿವೆ. ಆವೇಶ, ಉದ್ವೇಗ ಅಥವಾ ಪೂರ್ವಗ್ರಹಗಳ ಬಾಧೆಯಿಂದ ಸೊರಗಿದಂತೆ ಕಾಣುವವೇ ಹೆಚ್ಚು. ಅನ್ಯಾಯದಿಂದ ಜೈಲು ಸೇರಿ, ಹೊರಬಂದು ಸೇಡುತೀರಿಸಿಕೊಳ್ಳುವಂತೆ, ಹಿಂಸೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡುವ ಕಮರ್ಷಿಯಲ್ ಸಿನೇಮಾಗಳು ಜನಪ್ರಿಯವೇ. ಕಮುವಿನ ಎರಡು ಕಾದಂಬರಿಗಳು – ಅಪರಿಚಿತ/ಅನ್ಯ, ಪತನ ಜೈಲು-ಬಯಲುಗಳ ತಾತ್ವಿಕತೆಯನ್ನು, ಮೇಲ್ನೋಟಕ್ಕೆ ಭಿನ್ನ ಕೋನಗಳನ್ನು ಚಿತ್ರಿಸುತ್ತವೆ. ನಿಜಜೀವನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರದ ‘ಅಪರಿಚಿತ’ದ ಕಥಾನಾಯಕ ಅನಿರೀಕ್ಷಿತ, ಅನಪೇಕ್ಷಿತ ಘಟನೆಯೊಂದರ ಸುಳಿಗೆ ಸಿಕ್ಕಿ ಜೈಲು ಸೇರಿ, ಸ್ವತಂತ್ರ ಜೀವನಕ್ಕೆ ಹಾತೊರೆದರೆ, ನಿಜಜೀವನದಲ್ಲಿ ಯಶಸ್ಸು, ಜನಪ್ರಿಯತೆಯ ಹಿಂದೆ ಬಿದ್ದು ಯಶಸ್ವಿಯೂ ಆಗಿದ್ದ ವಕೀಲ ವೃತ್ತಿಯಲ್ಲಿದ್ದ ‘ಪತನ’ದ ಕಥಾನಾಯಕ ಯಶಸ್ಸು-ಜನಪ್ರಿಯತೆಯ ನಿರರ್ಥಕತೆಯನ್ನು ತಾಳಲಾರದೆ ಕಲಾಕೃತಿಯ ಕಳ್ಳತನವನ್ನು ಪ್ರದರ್ಶಿಸಿಕೊಳ್ಳುತ್ತ ಬಂಧಿಸಲ್ಪಡಲು, ಮರಣದಂಡನೆಯಾದರೂ ಸಾಕು ಎಂದು ಹಾತೊರೆಯುತ್ತಾನೆ. ಮೊದಲಿನವನಿಗೆ ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಶಿಕ್ಷೆ – ಮರಣದಂಡನೆಯನ್ನು ಎದುರಿಸುತ್ತಿರುವುದರ ಕುರಿತು ನೋವು, ಎರಡನೆಯವನಿಗೆ ಮಾಡುತ್ತಿರುವ ತಪ್ಪುಗಳಿಗೆ ದಂಡ ತೆತ್ತು ಹಗುರಾಗುವ ತವಕ; ಒಬ್ಬನಿಗೆ ಜೈಲಿನ ಕಠೋರತೆ ಕಾಡಿದರೆ, ಮತ್ತೊಬ್ಬನಿಗೆ ಅಕಸ್ಮಾತ್ ಎಚ್ಚೆತ್ತುಕೊಂಡ ಆತ್ಮವಿಮರ್ಶೆ ಅಣಕಿಸುತ್ತದೆ. ಎರಡರ ಹಿಂದಿರುವುದೂ ನ್ಯಾಯವ್ಯವಸ್ಥೆಯ ವಿಡಂಬನೆಯೇ. ಆ ಎರಡೂ ಮಗ್ಗುಲುಗಳನ್ನು ‘ಜೈಲು ಕತೆಗಳು’ ಕಥನಗಳು ಸುಲಭ ಗ್ರಾಹ್ಯ ಉದಾಹರಣೆಗಳೊಂದಿಗೆ ನಮ್ಮ ಮುಂದೆ ಬಿಡಿಸಿಡುತ್ತದೆ. ಈ ಸುಲಭವಾಗಿ ದಕ್ಕುವ ಸಾಧ್ಯತೆಯೇ ಅವುಗಳನ್ನು ಓದಿ ಮನತುಂಬಿಸಿಕೊಂಡು ಮಥಿಸದಿರುವ ಅಪಾಯವನ್ನೂ ಕಲ್ಪಿಸುತ್ತದೆ. ವಿಧಿಸುವ ಶಿಕ್ಷೆ ಅಪರಾಧ ಮಾಡುವುದರಿಂದ ತಡೆಯುತ್ತಿರುವಂತೆಯೇ, ಅದನ್ನು ಅನುಷ್ಟಾನಕ್ಕೆ ತರಲು ಸ್ಥಾಪಿಸಿರುವ ನ್ಯಾಯವ್ಯವಸ್ಥೆ ಸಾಕ್ಷಿ ಹೇಳಲು, ಸತ್ತೆಯ ವಿರುದ್ಧ ಸತ್ಯಹೇಳಲು “ಸಂಭಾವಿತ”ರನ್ನು ಹಿಂದೇಟು ಹಾಕುವಂತೆ ಮಾಡುತ್ತವೆ ಎನ್ನುವುದು ವಿಪರ್ಯಾಸವೇ ಸರಿ. ಅಪರಾಧ ಮತ್ತು ಶಿಕ್ಷೆಯ ಕುರಿತ ಅಂಕಿಅಂಶಗಳು, ಜೈಲಿನ ಒಳಹೊರಗುಗಳ ಕುರಿತ ನಮ್ಮ ಅನಿಸಿಕೆಗಳು ಬೆಚ್ಚಿಬೀಳಿಸುವಷ್ಟು ಅಸಂಬದ್ಧವಾಗಿವೆ ಎಂದು ಎಚ್ಚರಿಸುವ ಸತ್ಯವನ್ನು ಈ ಸಂಕಲದ ಕತೆಗಳು ಒಕ್ಕೊರಲಿನಿಂದ ಹಾಡಿ ಮನಸೆಳೆಯುತ್ತವೆ.
ಲೇಖಕ ಕೆ. ಸತ್ಯನಾರಾಯಣ ಅವರಿಗೂ, ಪ್ರಕಟಿಸಿದ ‘ಅಮೂಲ್ಯ ಪುಸ್ತಕ’ದವರಿಗೂ ಅಭಿನಂದನೆಗಳು.
-ಪ್ರಕಾಶ್ ನಾಯಕ್
ಕ್ಯಾಲಿಫೋರ್ನಿಯಾ




















Political | ರಾಜಕೀಯ










Reviews
There are no reviews yet.